ಕಾಮಿಡಿ, ಗೆಳೆತನ, ಎಮೋಷನ್ ಜೊತೆಗೆ ಮಧ್ಯಮ ವರ್ಗದ ಬದುಕಿನ ಕಥೆ; ಅಕ್ಟೋಬರ್ 23ಕ್ಕೆ ಚಿತ್ರಮಂದಿರಕ್ಕೆ ‘ಚಂದ್ರಹಾಸ’
‘ಚಂದ್ರಹಾಸ’ ಅಂದಾಕ್ಷಣ ಕನ್ನಡಿಗರಿಗೆ ಮೊದಲು ನೆನಪಾಗೋದು ಡಾ. ರಾಜ್ಕುಮಾರ್ ನಟನೆಯ ಸಿನಿಮಾ. ಇದೀಗ ಇದೇ ಹೆಸರಿನ ಮತ್ತೊಂದು ಸಿನಿಮಾ ಸ್ಯಾಂಡಲ್ವುಡ್ನಲ್ಲಿ ರಿಲೀಸ್ಗೆ ಸಜ್ಜಾಗಿದೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹರೀಶ್ ಹಿರಿಯೂರು ನಾಯಕನಾಗಿ ನಟಿಸಿರುವ ‘ಚಂದ್ರಹಾಸ’ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದ್ದು, ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ.
ಆನಂದ್ ಕಲಕಬಂಡಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಬಸವಂತಗೌಡ ಪಾಟೀಲ್ ಅಮರಶ್ರೀ ಕಂಬೈನ್ಸ್ ಬ್ಯಾನರ್ನಡಿ ನಿರ್ಮಿಸಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿರುವ ‘ಚಂದ್ರಹಾಸ’, ಇದೀಗ ಟ್ರೈಲರ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ. ಅಕ್ಟೋಬರ್ 23ರಂದು ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ರಂಗಭೂಮಿಯಿಂದ ಬೆಳ್ಳಿತೆರೆಗೆ ಬಂದ ತಂಡ
‘ಚಂದ್ರಹಾಸ’ ಚಿತ್ರದ ವಿಶೇಷತೆ ಎಂದರೆ ಬಹುತೇಕ ಹೊಸ ಪ್ರತಿಭೆಗಳೇ ಸೇರಿಕೊಂಡು ಸಿನಿಮಾ ಮಾಡಿರುವುದು. ಆದರೆ ಸಿನಿಮಾರಂಗ ಅವರಿಗೆ ಹೊಸದಲ್ಲ. ಚಿತ್ರತಂಡದ ಬಹುತೇಕ ಕಲಾವಿದರು ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿರುವವರು.
ನಾಯಕ ಹರೀಶ್ ಹಿರಿಯೂರು ರಂಗಭೂಮಿ ಹಿನ್ನೆಲೆಯ ಜೊತೆಗೆ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಪರಿಚಿತರಾದವರು. ಕಾಮಿಡಿ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ಹರೀಶ್, ಇದೀಗ ಮೊದಲ ಬಾರಿಗೆ ನಾಯಕನಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.
ತಮ್ಮ ಗೆಳೆಯನ ಹೊಸ ಪ್ರಯತ್ನಕ್ಕೆ ಶುಭ ಹಾರೈಸಲು ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹುಲಿ ಕಾರ್ತಿಕ್, ನವಾಜ್ ಸೇರಿದಂತೆ ಹಲವು ಕಲಾವಿದರು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಗೆಳೆಯ ‘ಚಂದ್ರ’ ಇದ್ದರೆ ಬದುಕು ನಗುವಿನಿಂದ ಕೂಡಿರುತ್ತೆ!
“ಚಂದ್ರ ಎನ್ನುವ ಗೆಳೆಯ ಜೊತೆಯಲ್ಲಿದ್ದರೆ ಜೀವನ ನಗುವಿನಿಂದ ಕೂಡಿರುತ್ತೆ” ಎನ್ನುವುದು ‘ಚಂದ್ರಹಾಸ’ ಚಿತ್ರದ ಒನ್ಲೈನ್ ಕಥೆ.
ಟ್ರೈಲರ್ನಲ್ಲಿ ಕಾಮಿಡಿಯ ಜೊತೆಗೆ ಗೆಳೆತನ, ಭಾವನೆಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನದ ಜಂಜಾಟಕ್ಕೂ ಜಾಗವಿರುವುದು ಗಮನ ಸೆಳೆಯುತ್ತದೆ. ನಗಿಸುವುದರ ಜೊತೆಗೆ ಎಮೋಷನಲ್ ಆಗಿಯೂ ಕನೆಕ್ಟ್ ಆಗುವ ಪ್ರಯತ್ನವನ್ನು ಸಿನಿಮಾ ಮಾಡಿರುವುದು ಟ್ರೈಲರ್ನಿಂದ ತಿಳಿದುಬರುತ್ತದೆ.
ಚಿತ್ರದ ಕಥೆಯ ಬಗ್ಗೆ ಮಾತನಾಡಿದ ನಿರ್ದೇಶಕ ಆನಂದ್ ಕಲಕಬಂಡಿ, “ಚಂದ್ರಹಾಸ ಕಥೆ ಸುಮ್ಮನೆ ಹುಟ್ಟಿದ್ದಲ್ಲ. ಸಿನಿಮಾದ ಹಲವಾರು ಪಾತ್ರಗಳು ಜೀವನದಲ್ಲಿ ನೋಡಿದ ಪಾತ್ರಗಳೇ ಆಗಿವೆ. ಪ್ರತಿಯೊಬ್ಬರನ್ನೂ ಕಾಡುವಂತಹ ಸಿನಿಮಾ ಇದು. ಖಂಡಿತವಾಗಿಯೂ ಎಲ್ಲರಿಗೂ ಇಷ್ಟವಾಗುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶ್ರೀದೇವಿಯಾಗಿ ಛಾಯಾಶ್ರೀ ಉಮೇಶ್
ಚಿತ್ರದಲ್ಲಿ ನಾಯಕಿ ಛಾಯಾಶ್ರೀ ಉಮೇಶ್ ಅವರು ಶ್ರೀದೇವಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಛಾಯಾಶ್ರೀ, “ಶ್ರೀದೇವಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾಸಿಟಿವ್ ಶೇಡ್ ಜೊತೆಗೆ ನೆಗೆಟಿವ್ ಶೇಡ್ ಕೂಡ ಇದೆ. ನಟನಾ ತಂಡದಿಂದ ಬಂದವಳು ನಾನು. ಮಂಡ್ಯ ರಮೇಶ್ ಸರ್ ನನ್ನ ಗುರುಗಳು” ಎಂದು ಹೇಳಿದ್ದಾರೆ.
‘ರಂಗರತ್ನ’ ಬಿರುದು ಕೊಟ್ಟ ಚಿತ್ರ!
ನಾಯಕ ಹರೀಶ್ ಅವರಿಗೆ ‘ಚಂದ್ರಹಾಸ’ ಸಿನಿಮಾ ಹಲವು ಕಾರಣಗಳಿಂದ ವಿಶೇಷವಾಗಿದೆ. ರಂಗಭೂಮಿಯಿಂದ ಬಂದಿರುವ ಹರೀಶ್ ಅವರಿಗೆ ಚಿತ್ರತಂಡ ‘ರಂಗರತ್ನ’ ಎನ್ನುವ ಬಿರುದನ್ನು ನೀಡಿರುವುದು ಅವರ ಖುಷಿಗೆ ಮತ್ತಷ್ಟು ಕಾರಣವಾಗಿದೆ.
ಚಿತ್ರದ ಅನುಭವ ಹಂಚಿಕೊಂಡ ಹರೀಶ್, “ಈ ಸಿನಿಮಾ ಮೂಲಕ ನನಗೆ ‘ರಂಗರತ್ನ’ ಎನ್ನುವ ಬಿರುದು ಕೊಟ್ಟಿದ್ದಾರೆ. ರಂಗಭೂಮಿಯಿಂದ ಬಂದವನಾಗಿರುವುದರಿಂದ ಇದು ನನಗೆ ತುಂಬಾ ಖುಷಿಯಾಯಿತು. ನಿರ್ದೇಶಕರು ಬಂದು ಹೀರೋ ಮಾಡುತ್ತೇನೆ ಅಂತ ಹೇಳಿದಾಗ, ‘ನಾನು ಕಾಮಿಡಿ ಮಾಡಿಕೊಂಡು ಇದ್ದೀನಿ, ಯಾಕೆ?’ ಎಂದು ಹೇಳಿದ್ದೆ. ಆಮೇಲೆ ಸಿನಿಮಾ ಮಾಡಿದೆವು” ಎಂದು ಹೇಳಿದ್ದಾರೆ.
ಮುಂದುವರಿದು, “ಖುಷಿಯನ್ನು ಎಲ್ಲರ ಹತ್ತಿರ ಹಂಚಿಕೊಳ್ಳಬಹುದು. ಆದರೆ ದುಃಖವನ್ನು ಎಲ್ಲರೂ ಹಂಚಿಕೊಳ್ಳುವುದಿಲ್ಲ. ಈ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗುತ್ತದೆ” ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಯಾರೆಲ್ಲ ಇದ್ದಾರೆ ‘ಚಂದ್ರಹಾಸ’ದಲ್ಲಿ?
ಬಸವಂತಗೌಡ ಪಾಟೀಲ್ ನಿರ್ಮಿಸಿರುವ ಈ ಚಿತ್ರಕ್ಕೆ ಬಸಣ್ಣ ಕಮತ್ತರ್ ಸಹ ನಿರ್ಮಾಪಕರಾಗಿದ್ದಾರೆ.
ಹರೀಶ್ ಹಿರಿಯೂರು ಅವರಿಗೆ ಜೋಡಿಯಾಗಿ ಛಾಯಾಶ್ರೀ ಉಮೇಶ್ ನಟಿಸಿದ್ದಾರೆ. ಜೊತೆಗೆ ನಿಂಗರಾಜು ಮಂಡ್ಯ, ಸಂತೋಷ್ ಕೆರಿ, ಸೂರ್ಯಕಲ, ಜ್ಯೋತಿ ಮಂಗಳೂರು ಹಾಗೂ ಕಳಕಪ್ಪ ತಲವಾರ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಪೂರ್ಣಚಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಚೇತನ್ ಶರ್ಮಾ ಛಾಯಾಗ್ರಹಣ, ವಿ. ಗಿರೀಶ್ ಎಂ.ಸಿ. ಹಳ್ಳಿ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಕಾಮಿಡಿ ಕಿಲಾಡಿಯಾಗಿ ಮನೆಮಾತಾಗಿದ್ದ ಹರೀಶ್ ಈಗ ಹೀರೋ ಆಗಿ ಹೇಗೆ ಮಿಂಚಲಿದ್ದಾರೆ? ರಂಗಭೂಮಿಯ ಅನುಭವವನ್ನು ಬೆಳ್ಳಿತೆರೆಯಲ್ಲಿ ಹೇಗೆ ಬಳಸಿಕೊಂಡಿದ್ದಾರೆ? ಗೆಳೆತನ, ಕಾಮಿಡಿ ಮತ್ತು ಎಮೋಷನ್ಗಳ ಈ ‘ಚಂದ್ರಹಾಸ’ ಪ್ರೇಕ್ಷಕರ ಮನ ಗೆಲ್ಲುತ್ತಾನಾ? ಎಂಬ ಕುತೂಹಲಕ್ಕೆ ಅಕ್ಟೋಬರ್ 23ರಂದು ಉತ್ತರ ಸಿಗಲಿದೆ.

